ಬಾ ಬಾ ಭಕುತರ ಹೃದಯ ಮಂದಿರ

ಬಾ ಬಾ ಭಕುತರ ಹೃದಯ ಮಂದಿರ ಬಾ ಬಾ ಜಗದೋದ್ಧಾರ || ಪ ||

ಬಾ ಬಾ ವೇಂಕಟಾಚಲ ವಿಹಾರ ಬಾ ಬಾ ಅನೇಕಾವತಾರ ಧೀರ ಶೂರ || ಅ.ಪ ||


ದಕ್ಷ ಕಮಲಾಕ್ಷ ರಾಕ್ಷಸ ಕುಲ ಶಿಕ್ಷ

ಲಕ್ಷ್ಮಣಾಗ್ರಜ ಲಕ್ಷ್ಮೀವಕ್ಷ

ಪಕ್ಷಿವಾಹನ ಪೂರ್ಣಲಕ್ಷಣ ಸರ್ವೇಶ

ಮೋಕ್ಷದಾಯಕ ಪಾಂಡವ ಪಕ್ಷ

ಅಕ್ಷಯವಂತ ಸೂಕ್ಷ್ಮಾಂಬರ ಧರಾಧ್ಯಕ್ಷ ಪ್ರತ್ಯಕ್ಷದ ದೈವ

ಅಕ್ಷತನಾರೇರ ತಕ್ಷಣದಲಿ ತಂದ

ಅಕ್ಷರ ಪುರುಷ ಗೋವಿಂದ || 1 ||


ಬಂಗಾರ ರಥದೊಳು ಶೃಂಗಾರವಾದ ಶ್ರೀ 

ಮಂಗಳಾಂಗ ಕಾಳಿಂಗ

ಭಂಗ ನರಸಿಂಗ ಅಂಗಜ ಜನಕ 

ಸಾರಂಗ ರಥಾಂಗ ಪಾಣಿ

ಸಂಗ ನಿಸ್ಸಂಗ ಮಾತಂಗ ವಿಹಂಗ ಪ್ಲವಂಗ ನಾಯಕ ಪರಿಪಾಲ

ಸಂಗೀತ ಲೋಲ ಗೋಪಾಂಗನೆಯರ 

ಅಂತರಂಗ ಸಂತಾಪ ವಿದೂರ || 2 ||


ತಾಳ ಜಾಗಟೆ ಮದ್ದಳೆ ದುಂದುಭಿ ಭೇರಿ

ಕಾಳೆ ಹೆಗ್ಗಾಳೆ ತಮ್ಮಟೆ

ನಿಸ್ಸಾಳೆ ಪಟಹ ತಂಬೂರಿ ಪಣವ 

ಕಂಸಾಳೆ ಕಂಬುಢಕ್ಕ ವಾದ್ಯ

ಸೂಳೈಸುತಲಿರೆ ಭಾಗವತರ ಸಂಮೇಳದಿ ಕುಣಿದೊಲಿದಾಡೆ

ಸಾಲುಪಂಜಿನ ಗುಂಪು ಛತ್ರ 

ಚಾಮರ ಧ್ವಜಢಾಲುಗಳು ಒಪ್ಪಿರಲು || 3 ||


ಹತ್ತವತಾರದ ಹರಿಯೆ ಘನಸಿರಿಯೆ

ನಾನು ಮತ್ತೊಬ್ಬರನು ಹೀಗೆ ಕರೆಯೆ

ಭೃತ್ಯರ ಸಂಗಡೋಡ್ಯಾಡುವ ದೊರೆಯೆ 

ಎನ್ಹತ್ತಿಲಿ ಆಡುವ ಮರಿಯೆ

ಚಿತ್ತದೊಲ್ಲಭ ನಮ್ಮ ವಿಜಯವಿಠ್ಠಲರೇಯ ಎತ್ತನೋಡಲು ನಿನಗೆ ಸರಿಯೆ

ಅತ್ತಿತ್ತ ಪೋಗದೆ ಇತ್ತ ಬಾರೈಯ 

ಎನ್ಹತ್ತಿಲಿ ವೆಂಕಟದೊರೆಯೇ || 4 ||

ಬಂದನೋ ಗೋವಿಂದ ಚಂದದಿ ಆನಂದ

ಬಂದನೋ ಗೋವಿಂದ ಚಂದದಿ ಆನಂದ

ಸುಂದರಿಯ ಮಂದಿರಕ್ಕೆ ನಂದನ ಕಂದಾ ನಂದನ ಕಂದಾ || ಪ ||


ಸುಂದರಕಾರ ನಂದ ಕಂಡ ಗಂಭೀರಾ

ಇಂದು ವದನೆಯರ ಮುಖಗಳಿಂದ  ನೋಡಿದ

ತಂದ ಕುಸುಮ ಕರದಿಂದ ಮುಡಿಸಿದ

ಬಂದನೋ  ಗೋವಿಂದನೋ  ಅರವಿಂದ ನಯನ || 1 ||


ಕಾನನದಲ್ಲಿ ಬಲು ಧೀರನಾಗಲ್ಲಿ

ವೇಣುನಾದವೂ ತಾ ಕೂಡಿ ಮೋದವೂ

ಜಾಣನಿವನು ಸುಮಬಾಣ ಪಿತನೂ

ಮಾನಿನೀ ಮನೆಗಳಲಿ ಗಾನ ಮಾಡುತಾ ಗಾನ ಮಾಡುತಾ || 2 ||


ಓಡಿ ಬಂದರೂ ಬಲು ಬೇಡಿಕೊಂಡರೂ

ಗಾಡಿಕಾರನು ಅವರ ಕೂಡಿ ಮೆರೆದನೂ

ಮಾಡಿದ ಜಾಲ ವಾಸುದೇವ ವಿಠಲಾ

ಮಾಡಿದ ಮನ ಮಾಡಿದಾತ ಕೂಡಿದನಾಗ ತಾ ಕೂಡಿದನಾಗ || 3 ||

ದೇವ ಬಂದ ನಮ್ಮ

ದೇವ ಬಂದ ನಮ್ಮ ಸ್ವಾಮಿ ಬಂದನೊ

ದೇವರ ದೇವ ಶಿಖಾಮಣಿ ಬಂದನೊ ||ಪ||


ಉರಗಶಯನ ಬಂದ ಗರುಡಗಮನ ಬಂದ

ನರಗೊಲಿದವ ಬಂದ ನಾರಾಯಣ ಬಂದನೊ ||ಅ.ಪ||


ಮಂದರೋದ್ದರ ಬಂದ ಮಾಮನೋಹರ ಬಂದ

ಬೃಂದಾವನಪತಿ ಗೋವಿಂದ ಬಂದನೊ ||1||


ನಕ್ರಹರನು ಬಂದ ಚಕ್ರಧರನು ಬಂದ

ಅಕ್ರೂರಗೊಲಿದ ತ್ರಿವಿಕ್ರಮ ಬಂದನೊ||2||


ಪಕ್ಷಿವಾಹನ ಬಂದ ಲಕ್ಷ್ಮೀರಮಣ ಬಂದ

ಅಕ್ಷಯ ಫಲದ ಲಕ್ಷ್ಮಣಾಗ್ರಜ ಬಂದನೊ ||3||


ನಿಗಮಗೋಚರ ಬಂದ ನಿತ್ಯತೃಪ್ತನು ಬಂದ

ನಗೆಮುಖ ಪುರಂದರವಿಠಲ ಬಂದನೊ||4||

ನೋಡಿದೆ ವೆಂಕಟರಮಣನ

ನೋಡಿದೆ ವೆಂಕಟರಮಣನ | ದ್ವಾರ

ವಾಡ ಗ್ರಾಮದಿ ನಿಂತ ದೇವನ ||pa||


ರೂಢಿಪ ದಾಸರಿಗೆ ನೀಡಲು ದರುಶನ

ಗೂಢ ಪಾದಾದ್ರಿಯಿಂ ಬಂದ ಮಹಾತ್ಮನ ||a.pa||


ಈತನೆ ವೈಕುಂನಾಥನು | ನಿಜ

ಶತಕುಂಭೋದರ ದಾತನು

ಮಾತಂಗ ವರದಾತ ಶ್ವೇತವಾಹನ ಸೂತ

ಜಾತರಹಿತ ದನುಜಾತ ಕುಲಾಂತಕ ||1||


ತೋಂಡಮಾನಗೋಲಿ ದಾತನು | ತನ್ನ

ತೋಂಡ ಜನರಿಗೇ ಸುಖದಾತನು |

ಅಂಡಜಾತ ಪ್ರಕಾಂಡ ವರೂಥ 

ಬ್ರಹ್ಮಾಂಡನಾಯಕನಾದ ಪಾಂಡವಪಾಲನ ||2||


ಇಂದು ಧರಾಮರ ವಂದ್ಯನ | ಶಾಮ

ಸುಂದರ ವಿಠಲ ಮುಕುಂದನ

ಸಂದರುಶನ ಮಾತ್ರದಿ ಹಿಂದೆ ಮಾಡಿದ ದೋಷ

ವೃಂದವೆಲ್ಲವು ಇಂದು ಬೆಂದು ಪೋದವು ಘನ ||3|| 

ಶ್ರೀನಿಕೇತನ ಪಾಲಯ ಮಾಂ

ಶ್ರೀನಿಕೇತನ ಪಾಲಯ ಮಾಂ ಶ್ರೀನಿಕೇತನ ||ಪ||

ಜ್ಞಾನಗಮ್ಯ ಕರುಣಾನಿಧಿ ನಿನ್ನಡಿಗಾನಮಿಸುವೆ ಪೊರೆ ದೀನದಯಾಳೋ ||ಅ.ಪ||


ಜ್ಞಾನಮಾನದಾ ಶರಣರ ಸುರಧೇನು ಸರ್ವದಾ

ನೀನೆಂದರಿತು ಸದಾನುರಾಗದಲಿ 

ಧ್ಯಾನಿಪೆ ಮನದನುಮಾನವ ಕಳೆಯೋ ||1||


ಶ್ರೀಕರಾರ್ಚಿತ ಪದಾಬ್ಜ ಪರಾಕು ಅಚ್ಯುತ

ಶೋಕವಿನಾಶ ವಿಶೋಕಜನಕ

ಹೃದ್ವ್ಯಾಕುಲ ಕಳೆಯೋ ಕೃಪಾಕರ ಒಲಿದು ||2||


ಪನ್ನಗಾಚಲನಿವಾಸ ಪ್ರಪನ್ನ ವತ್ಸಲ

ಭಿನ್ನಪ ಕೇಳೋ ಜಗನ್ನಾಥವಿಠ್ಠಲ

ಧನ್ಯನ ಮಾಡೋ ಶರಣಯ್ಯ ಶರಣಾ ||3||

ಬಾರೆ ಭಾಗ್ಯದ ನಿಧಿಯೇ

ಬಾರೆ ಭಾಗ್ಯದ ನಿಧಿಯೇ ಕರವೀರ ನಿವಾಸಿನಿ ಸಿರಿಯೇ || ಪ ||

ಬಾರೆ ಬಾರೆ ಕರವೀರ ನಿವಾಸಿನಿ 

ಬಾರಿಬಾರಿಗೂ ಶುಭ ತೋರು ನಮ್ಮ ಮನಗೆ || ಅ.ಪ ||


ನಿಗಮ ವೇದ್ಯಳೆ ನೀನು ನಿನ್ನ ಪೊಗಳಲಾರೆನು ನಾನು

ಮಗನಪರಾಧವ ತೆಗೆದೆಣಿಸದೆ ನೀ

ಲಗುಬಗೆಯಿಂದಲಿ ಪನ್ನಗವೇಣಿ || 1 ||


ಲೋಕಮಾತೆಯು ನೀನು ನಿನ್ನ ತೋಕನಲ್ಲವೆ ನಾನು

ಆಕಳು ಕರುವಿನ ಸ್ವೀಕರಿಸುವ ಪರಿ

ನೀ ಕರುಣದಿ ಕಾಲ್ಹಾಕು ನಮ್ಮ ಮನೆಗೆ || 2 ||


ಕಡೆಗೂ ನಮ್ಮನಿ ವಾಸ ನಿನ್ನೊಡೆಯ ಅನಂತಾದ್ರೀಶ

ಒಡೆಯನಿದ್ದಲ್ಲಿಗೆ ಮಡದಿಯು ಬರುವುದು

ರೂಢಿಗುಚಿತವಿದು ನಡೆ ನಮ್ಮ ಮನೆಗೆ ||3||

ಮಧ್ವಾಂತರ್ಗತ ವೇದವ್ಯಾಸ

ಮಧ್ವಾಂತರ್ಗತ ವೇದವ್ಯಾಸ ಕಾಯೋ ಶುದ್ಧ ಮೂರುತಿಯೆ ಸರ್ವೇಶ ||ಪ||

ಶ್ರದ್ಧೆಯಿಂದಲಿ ನಿನ್ನ ಭಜಿಸುವ ನರರಿಗೆ 

ಬುದ್ಧ್ಯಾದಿಗಳ ಕೊಟ್ಟುದ್ಧರಿಪ ದೇವರದೇವ||ಅ.ಪ||


ದ್ವಾಪರದೊಳಗೊಬ್ಬ ಮುನಿಪ ತನ್ನಕೋಪದಿಂದಲಿ ಕೊಟ್ಟ ಶಾಪ

ಸ್ಥಾಪಿಸಲು ಜ್ಞಾನ ಲೋಪವಾಗಿ ಅಪಾರ ತತ್ವಸ್ವರೂಪ

ಶ್ರೀಪತಿಯೆ ಕಾಯೆಂದು ಮೊರೆಯಿಡೆ ಪಾಪ ವಿರಹಿತಳಾದ ಯಮುನೆಯ

ದ್ವೀಪದಲಿ ಅಂಬಿಗರ ಹೆಣ್ಣಿನ ರೂಪಕ್ಕೊಲಿದವಳಲ್ಲಿ ಜನಿಸಿದೆ ||1||


ವೇದವಾದಗಳೆಲ್ಲ ಕೆಡಲು ತತ್ವವಾದಿ ಜನರು ಬಾಧೆ ಪಡಲು

ಮೇಧಿನಿ ಸುರರು ಮೊರೆಯಿಡಲು ಸರ್ವವೇದ ವಿಭಾಗ ರಚಿಸಲು

ಮೋದದಿಂದ ತದರ್ಥ ಬೋಧಕ ವಾದ ಸೂತ್ರ ಪುರಾಣ ರಚಿಸಿ

ವಿವಾದಗಳ ನಿರ್ವಾದ ಮಾಡಿದ ಸಾಧುವಂದಿತ ಬಾದರಾಯಣ ||2||


ಸುಮತಿಗಳಿಗೆ ನೀ ಬೋಧಿಸಿದೆ ಮಿಕ್ಕ ಕುಮತಿಗಳನ್ನು ನೀ ಛೇದಿಸಿದೆ

ಕ್ರಿಮಿಯಿಂದ ರಾಜ್ಯವಾಳಿಸಿದೆ ಜಗತ್‍ಸ್ವಾಮಿ ತಾನೆಂದು ತೋರಿಸಿದೆ

ವಿಮಲ ರೂಪನೆ ಕಮಲನಾಭನೆ ರಮೆಯ ಅರಸನೆ ರಮ್ಯ ಚರಿತನೆ

ಮಮತೆಯಲಿ ಕೊಡು ಕಾಮಿತಾರ್ಥವ ನಮಿಸುವೆನು ಹಯವದನ ಮೂರುತಿ ||3||

ಅಪಮೃತ್ಯು ಪರಿಹರಿಸೊ

ಅಪಮೃತ್ಯು ಪರಿಹರಿಸೊ ಅನಿಲದೇವಾ

ಕೃಪಣವತ್ಸಲನೆ ಕಾವರ ಕಾಣೆ ನಿನ್ನುಳಿದು ।।ಪ।।


ನಿನಗಿನ್ನು ಸಮರಾದ ಅನಿಮಿತ್ತ ಬಂಧುಗಳು

ಎನಗಿಲ್ಲವಾವಾವ ಜನ್ಮದಲ್ಲೀ

ಅನುದಿನದಲೆನ್ನುದಾಸೀನ ಮಾಡುವುದು

ನಿನಗೆ ಅನುಚಿತೋಚಿತವೆ ಸಜ್ಜನಶಿಖಾಮಣಿಯೆ  ।।೧।।


ಕರಣಮಾನಿಗಳು ನಿನ್ನ ಕಿಂಕರರು ಮೂರ್ಲೋಕದರಸು

ಹರಿಯು ನಿನ್ನೊಳಗಿಪ್ಪ ಸರ್ವಕಾಲ

ಪರಿಸರನೆ ಈ ಭಾಗ್ಯ ದೊರೆತನಕೆ ಸರಿಯುಂಟೆ

ಗುರುವರಿಯೆ ನೀ ದಯಾಕರನೆಂದು ಮೊರೆಹೊಕ್ಕೆ ।।೨।।


ಭವರೋಗ ಮೋಚಕನೆ ಪವಮಾನರಾಯ ನಿ

ನ್ನವನು ನಾನು ಮಾಧವಪ್ರಿಯನೇ

ಜವನ ಬಾಧೆಯ ಬಿಡಿಸು ಅವನಿಯೊಳು ಸುಜನರಿಗೆ

ದಿವಿಜಗಣ ಮಧ್ಯದಲಿ ಪ್ರವರ ನೀನಹುದಯ್ಯ ।।೩।।


ಜ್ಞಾನವಾಯುರೂಪಕನೆ ನೀನಹುದೋ ವಾಣಿ ಪಂ

ಚಾನನಾದ್ಯಮರರಿಗೆ ಪ್ರಾಣದೇವಾ

ದೀನವತ್ಸಲನೆಂದು ನಾ ನಿನ್ನ ಮೊರೆ ಹೊಕ್ಕೆ

ದಾನವಾರಣ್ಯ ಕೃಶಾನು ಸರ್ವದ ಎಮ್ಮ ।।೪।।


ಸಾಧನ ಶರೀರವಿದು ನೀ ದಯದಿ ಕೊಟ್ಟದ್ದು

ಸಾಧಾರಣವು ಅಲ್ಲ ಸಾಧುಪ್ರಿಯಾ

ವೇದವಾದೋದಿತ ಜಗನ್ನಾಥ ವಿಠಲನ

ಪಾದ ಭಕುತಿಯನಿತ್ತು ಮೋದ ಕೊಡು ಸತತ ।।೫।।

ಕಂಡೆ ಕಂಡೆ ವಾದಿರಾಜರ

ಕಂಡೆ ಕಂಡೆ ವಾದಿರಾಜರ 

ಶ್ರೀ ಹಯವದನನ ಪಾದ 

ಪುಂಡರೀಕ ಪೂಜಿಸುವವರ ll


ಭಂಡ ಮತಗಳ ತುಂಡುಮಾಡಿ ಭೂಮಂಡಲವ ಜರಿಸೀ

ಚಂಡ ಪ್ರಚಂಡ ಶ್ರೀ ಪಾಂಡುರಂಗನ 

ಪ್ರೀತಿ ಪಡೆದ ವೀರರಾ ll1ll


ಅನೇಕ ಶಾಸ್ತ್ರವ ಅನಾಯಾಸದಿಂದ ಸನಾತರಿಗೆ ಪೇಳಿ

ಅನೂಕೂಲ ವರ ಗೋಕುಲ ವಾಸಗೆ 

ಪ್ರಣಾಮ ಮಾಡಿದ ಧೀರರಾll2ll


ಶೂರತನದಲಿ ವೀರಸೇನನ ಗರ್ವವನೆ ಮುರಿದಾ

ಧೀರಾಲಕ್ಷ್ಮಿ ನಾರಸಿಂಹನ 

ಸಾರಿ ಪೊಗಳಿದ ವೀರರಾll3ll 

ತುಂಗಾತೀರ ವಿರಾಜಂ

ತುಂಗಾತೀರ ವಿರಾಜಂ ಭಜಮನ

ರಾಘವೇಂದ್ರ ಯತಿರಾಜಂ ಭಜಮನ           ||ಪ||


ಮಂಗಲಕರ ಮಂತ್ರಾಲಯವಾಸಂ

ಶೃಂಗಾರಾನನ ವಿಲಸಿತಹಾಸಂ

ರಾಘವೇಂದ್ರ ಯತಿರಾಜಂ ಭಜಮನ           ||೧||


ಕರಧೃತ ದಂಡ ಕಮಂಡಲು ಮಾಲಂ

ಸುರುಚಿರ ಚೇಲಮ್ ಧೃತ ಮಣಿ ಮಾಲಂ

ರಾಘವೇಂದ್ರ ಯತಿರಾಜಂ ಭಜಮನ           ||೨||


ನಿರುಪಮ ಸುಂದರ ಕಾಯ ಸುಶೀಲಂ

ವರಕಮಲೇಶಾರ್ಪಿತ ನಿಜ ಸಕಲಂ

ರಾಘವೇಂದ್ರ ಯತಿರಾಜಂ ಭಜಮನ           |||| 

ಸ್ಮರಿಸಿ ಬದುಕಿರೋ

ಸ್ಮರಿಸಿ ಬದುಕಿರೋ ದಿವ್ಯಚರಣಕೆರಗಿರೊ
ದುರಿತ ತರಿದು ಪೊರೆವ ವಿಜಯಗುರುಗಳೆಂಬರ || ಪ ||

ದಾಸರಾಯನ ದಯವ ಸೂಸಿಪಡೆದನ
ದೋಷರಹಿತನ ಸಂತೋಷಭರಿತನ || ೧ ||

ಜ್ಞಾನವಂತನ ಬಲುನಿಧಾನಿ ಶಾಂತನ
ಮಾನವಂತನ ಬಲುವದಾನ್ಯ ದಾಂತನ || ೨ ||

ಹರಿಯ ಭಜಿಸುವ ನರಹರಿಯ ಯಜಿಸುವ
ದುರಿತ ತ್ಯಜಿಸುವ ಜನಕೆ ಹರುಷಸುರಿಸುವ || ೩ ||

ಮೋದಭರಿತನ ಪಂಚಭೇದವರಿತನ
ಸಾಧುಚರಿತನ ಮನವಿಷಾದಮರೆತನ || ೪ ||

ಇವರ ನಂಬಿದ ಜನಕೆ ಭವವಿದೆಂಬುದು
ಹವಣವಾಗದೋ ನಮ್ಮವರ ಮತವಿದು || ೫ ||

ಪಾಪಕೋಟಿಯ ರಾಶಿ ಲೇಪವಾಗದೊ
ತಾಪಕಳೆವನೋ ಬಲುದಯಾಪಯೋನಿಧಿ || ೬ ||

ಕವನರೂಪದಿ ಹರಿಯ ಸ್ತವನಮಾಡಿದ
ಭುವನ ಬೇಡಿದ ಮಾಧವನ ನೋಡಿದ || ೭ ||

ರಂಗನೆಂದನ ಭವವು ಹಿಂಗಿತೆಂದನ
ಮಂಗಳಾಂಗನ ಅಂತರಂಗವರಿತನ || ೮ ||

ಕಾಶಿನಗರದಲ್ಲಿದ್ದ ವ್ಯಾಸದೇವನ ದಯವ
ಸೂಸಿಪಡೆದನ ಉಲ್ಲಾಸತನದಲಿ || ೯ ||

ಚಿಂತೆ ಬ್ಯಾಡಿರೊ ನಿಶ್ಚಿಂತರಾಗಿರೊ
ಶಾಂತ ಗುರುಗಳ ಪಾದವಂತು ನಂಬಿರೋ || ೧೦ ||

ಖೇದವಾಗದೊ ನಿಮಗೆ ಮೋದವಾಹುದೊ
ಆದಿದೇವನ ಸುಪ್ರಸಾದವಾಹುದೊ || ೧೧ ||

ತಾಪ ತಡೆವನೊ ಬಂದ ಪಾಪ ಕಡಿವನೊ
ಶ್ರೀಪತಿಯಪಾದ ಸಮೀಪವಿಡುವನೋ || ೧೨ ||

ಗಂಗೆ ಮಿಂದರೆ ಮಲವು ಹಿಂಗಿತಲ್ಲದೆ
ರಂಗನೊಲಿಯನೊ ಭಕ್ತಸಂಗದೊರೆಯದೇ || ೧೩ ||

ವೇದ ಓದಲು ಬರಿದೆ ವಾದಮಾಡಲು
ಹಾದಿಯಾಗದೊ ಬುಧರ ಪಾದ ನಂಬದೆ || ೧೪ ||

ಲೆಕ್ಕವಿಲ್ಲದಾ ದೇಶ ತುಕ್ಕಿಬಂದರು
ದುಃಖವಲ್ಲದೆ ಲೇಶ ಭಕುತಿ ದೊರೆಯದೊ || ೧೫ ||

ದಾನ ಮಾಡಲು ದಿವ್ಯಗಾನಪಾಡಲು
ಜ್ಞಾನ ದೊರೆಯದೊ ಇವರ ಅಧೀನವಾಗದೆ || ೧೬ ||

ನಿಷ್ಠೆಯಾತಕೆ ಕಂಡ ಕಷ್ಟವ್ಯಾತಕೆ
ದಿಟ್ಟಗುರುಗಳ ಪಾದ ಮುಟ್ಟಿಭಜಿಸಿರೊ || ೧೭ ||

ಪೂಜೆ ಮಾಡಲು ಕಂಡ ಗೋಜುಬೀಳಲು
ಬೀಜಮಾತಿನ ಫಲಸಹಜ ದೊರೆಯದು || ೧೮ ||

ಸುರಸು ಎಲ್ಲರು ಇವರ ಕರವ ಪಿಡಿವರೊ
ತರಳರಂದದಿ ಹಿಂದೆ ತಿರುಗುತಿಪ್ಪರೊ || ೧೯ ||

ಗ್ರಹಗಳೆಲ್ಲವು ಇವರ್ಗೆ ಸಹಾಯ ಮಾಡುತ
ಅಹೋರಾತ್ರಿಲಿ ಸುಖದ ನಿವಹ ಕೊಡುವವೊ || ೨೦ ||

ವ್ಯಾಧಿ ಬಾರದೊ ದೇಹ ಬಾಧೆ ತಟ್ಟದೊ
ಆದಿದೇವನ ಸುಪ್ರಸಾದವಾಹುದೊ || ೨೧ ||

ಪತಿತಪಾಮರ ಮಂದಮತಿಯು ನಾ ಬಲು
ತುತಿಸಲಾಪೆನೆ ಇವರ ಅತಿಶಯಂಗಳ || ೨೨ ||

ಕರುಣದಿಂದಲಿ ಎಮ್ಮ ಪೊರೆವನಲ್ಲದೆ
ದುರಿತಕೋಟಿಯ ಬ್ಯಾಗ ತರಿವ ದಯದಲಿ || ೨೩ ||

ಮಂದಮತಿಗಳು ಇವರ ಚೆಂದವರಿಯದೆ
ನಿಂದೆ ಮಾಡಲು ಭವದಬಂಧ ತಪ್ಪದೊ || ೨೪ ||

ಇಂದಿರಾಪತಿ ಇವರ ಮುಂದೆ ಕುಣಿವನೊ
ಅಂದವಚನವ ನಿಜಕೆ ತಂದು ಕೊಡುವನೊ || ೨೫ ||

ಉದಯ ಕಾಲದಿ ಈ ಪದವ ಪಠಿಸಲು
ಮದಡನಾದರು ಜ್ಞಾನ ಉದಯವಾಹುದೊ || ೨೬ ||

ಸಟೆ ಇದಲ್ಲವೋ ವ್ಯಾಸವಿಠಲ ಬಲ್ಲನೊ
ಪಠಿಸಬಹುದಿದು ಕೇಳಿ ಕುಟಿಲರಹಿತರು || ೨೭ ||